ಜಿಫೈರಿಯ
	ಅಕಶೇರುಕಗಳಲ್ಲಿನ ಒಂದು ಗುಂಪು. ಇದರಲ್ಲಿ ಸೈಪಂಕ್ಯುಲಿಯ ಮತ್ತು ಎಕಿಯೂರಿಯ ಎಂಬ ಉಪಗುಂಪುಗಳಿವೆ. ಇವುಗಳಲ್ಲಿ ಸೇರಿರುವ ಪ್ರಾಣಿಗಳ ಮತ್ತು ಇತರ ಪ್ರಾಣಿಗಳ ಸಂಬಂಧ ಅನಿಶ್ಚಯವಾಗಿರುವುದರಿಂದ ಪ್ರಾಣಿಸಾಮ್ರಾಜ್ಯದಲ್ಲಿ ಈ ಗುಂಪಿನ ಸ್ಥಾನಮಾನದ ಬಗ್ಗೆ ಇನ್ನೂ ವಿವಾದ ಇದ್ದೇ ಇದೆ. ಬಹುಕಾಲ ಜಿಫೈರಿಯ ಗುಂಪನ್ನು ಅನೆಲಿಡ ವಿಭಾಗದ ಒಂದು ವರ್ಗವಾಗಿ ಪರಿಗಣಿಸಲಾಗಿತ್ತು.  ಆದರೆ ಇವುಗಳ ಪರಸ್ಪರ ಸಂಬಂಧವೇ ಇನ್ನೂ ನಿಷ್ಕರ್ಷೆಯಾಗಿಲ್ಲವಾದ್ದರಿಂದ ಪ್ರಾಣಿಶಾಸ್ತ್ರಜ್ಞರ ಅಭಿಪ್ರಾಯದಂತೆ ಇದೊಂದು ನಿರ್ದಿಷ್ಟ ವರ್ಗವೇ ಅಲ್ಲ. ಅಂತೆಯೇ ಇದರಲ್ಲಿ ಸೇರಿಸಲಾಗಿದ್ದ ಪ್ರಾಣಿಗಳಲ್ಲಿ ಎಲ್ಲವನ್ನೂ ಬೇರೆ ಬೇರೆ ಗುಂಪುಗಳಿಗೆ ವರ್ಗಾಯಿಸಲಾಗಿದೆ.  ಉದಾಹರಣೆಗೆ ಸ್ಟರ್ನಾಪ್ಸಿಸ್ ಹುಳುವನ್ನು ಪಾಲಿಕೀಟ ವರ್ಗಕ್ಕೂ ಎಕಿಯೂರಸ್ ಮತ್ತು ಸೈಪುಕ್ಯುಲಸ್‍ಗಳನ್ನು ಎಕಿಯೂರಿಡ ಮತ್ತು ಸೈಪುಕ್ಯುಲಿಡ ಎಂಬ ಹೆಸರಿನ ನಿರ್ದಿಷ್ಟ ವಿಭಾಗಗಳಿಗೂ ಪ್ರೈಯಾಪ್ಯುಲಸ್‍ನ್ನು ಆಸ್ಕೆಲ್ಮಿಂತೀಸ್ ವಿಭಾಗದ ಪ್ರೈಯಾಪ್ಯುಲಿಡ ಗುಂಪಿಗೂ ಸೇರಿಸಲಾಗಿದೆ.
(ಪಿ.ಎಸ್.ಆರ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ